ಮಂಡ್ಯ: ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಪ್ರಸಿದ್ಧ ಗಗನಚುಕ್ಕಿ ಮತ್ತು ಭರಚುಕ್ಕಿ ಜಲಪಾತದ ತೀರದಲ್ಲಿ ಜಲಪಾತೋತ್ಸವದ ಸಮಾರೋಪ ಕಾರ್ಯಕ್ರಮ ವೈಭವದಿಂದ ಜರುಗಿತು. ಈ ಸಮಾರಂಭದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ರಾಜ್ಯ ಸರ್ಕಾರದ ಪ್ರವಾಸೋದ್ಯಮ ಅಭಿವೃದ್ಧಿ ಹಾಗೂ ಜನಪರ ಯೋಜನೆಗಳ ಕುರಿತು ಹಲವು ಪ್ರಮುಖ ಘೋಷಣೆಗಳನ್ನು ಮಾಡಿದರು.

ಕಾರ್ಯಕ್ರಮದಲ್ಲಿ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ, ಶಾಸಕ ಪಿ.ಎಂ. ನರೇಂದ್ರಸ್ವಾಮಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡು ಉತ್ಸವದ ಸಡಗರಕ್ಕೆ ಸಾಕ್ಷಿಯಾದರು.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮ್ಮ ಭಾಷಣದಲ್ಲಿ, ಕರ್ನಾಟಕದ ಪ್ರವಾಸೋದ್ಯಮ ನೀತಿಗೆ ಹೊಸ ರೂಪ ನೀಡಲಾಗುತ್ತಿದ್ದು, ಪ್ರವಾಸೋದ್ಯಮ ವಿಸ್ತರಣೆಗಾಗಿ ಸರ್ಕಾರ ಗಂಭೀರವಾಗಿ ಮುಂದಾಗಿರುವುದಾಗಿ ತಿಳಿಸಿದರು. ಈಗಾಗಲೇ 1.50 ಲಕ್ಷ ಉದ್ಯೋಗಗಳು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸೃಷ್ಟಿಯಾಗಿವೆ ಎಂದು ಅವರು ಮಾಹಿತಿ ನೀಡಿದರು.

ರೈತರು, ವಿದ್ಯಾರ್ಥಿಗಳು ಹಾಗೂ ಯುವಕರು ರಾಜ್ಯದ ಐತಿಹಾಸಿಕ, ಧಾರ್ಮಿಕ ಹಾಗೂ ನೈಸರ್ಗಿಕ ಸೌಂದರ್ಯ ತಾಣಗಳನ್ನು ವೀಕ್ಷಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಡಿ.ಕೆ.ಶಿವಕುಮಾರ್, ಇದಕ್ಕಾಗಿ ಪ್ರವಾಸೋದ್ಯಮ ಇಲಾಖೆ ಮತ್ತು ಪ್ರಾಥಮಿಕ ಶಿಕ್ಷಣ ಇಲಾಖೆಗಳ ಸಂಯೋಜನೆಯೊಂದಿಗೆ ವಿಶೇಷ ಯೋಜನೆ ರೂಪಿಸಲಾಗುವುದು ಎಂದು ಘೋಷಿಸಿದರು.

ಕರ್ನಾಟಕವು ಧಾರ್ಮಿಕ, ಶೈಕ್ಷಣಿಕ, ಜಾನಪದ, ಸಾಹಿತ್ಯ, ಕಲೆ ಮತ್ತು ಚಿತ್ರಕಲೆ ಕ್ಷೇತ್ರಗಳಲ್ಲಿ ದೇಶದಾದ್ಯಂತ ಮಾದರಿಯಾಗಿದೆ ಎಂದು ಹೆಮ್ಮೆಪಟ್ಟ ಉಪ ಮುಖ್ಯಮಂತ್ರಿ, ರಾಜ್ಯ ಸರ್ಕಾರ ಜಾರಿಗೊಳಿಸಿರುವ ಐದು ಖಾತರಿ ಯೋಜನೆಗಳು ಲಕ್ಷಾಂತರ ಕುಟುಂಬಗಳಿಗೆ ಆಶಾಕಿರಣವಾಗಿವೆ ಎಂದರು. ಮುಂದಿನ ದಿನಗಳಲ್ಲಿ ಈ ಯೋಜನೆಗಳನ್ನು ಇನ್ನಷ್ಟು ಬಲಪಡಿಸಿ, ಜನತೆಗೆ ಹೆಚ್ಚಿನ ಲಾಭ ಒದಗಿಸುವ ಕಾರ್ಯವಿರಲಿದೆ ಎಂದರು.

Leave a Reply

Your email address will not be published. Required fields are marked *