ಬೆಂಗಳೂರು: ಗ್ರಾಮೀಣ ಭಾಗದಲ್ಲಿ ಪಡಿತರ ವಿತರಣೆಯಲ್ಲಿ ನಡೆಯುವ ಆಗು-ಹೋಗುಗಳ ಕಥಾ ಹೊಂದಿರುವ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಎಂಬ ಚಿತ್ರವು ಕಳೆದ ಎರಡು ತಿಂಗಳ ಹಿಂದಷ್ಟೇ ಸೆಟ್ಟೇರಿತ್ತು. ರಾಗಿಣಿ ದ್ವಿವೇದಿ ಅಭಿನಯದ ಈ ಚಿತ್ರವು ಬಹುತೇಕ ಚಿತ್ರೀಕರಣ ಮಗಿಸಿದ್ದು. ಇದೇ ವರ್ಷಾಂತ್ಯದಲ್ಲಿ ಈ ಸಿನಿಮಾವನ್ನು ಬಿಡುಗಡೆ ಮಾಡುವ ನೀರಿಕ್ಷೆಯಲ್ಲಿದೆ.
ಮಂಡ್ಯ ಜಿಲ್ಲೆಯ ದೊಡ್ಡರಸಿನಕೆರೆ ಸುತ್ತಮುತ್ತ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರದ ಬಹುತೇಕ ಚಿತ್ರೀಕರಣ ನಡೆಸಲಾಗಿದೆ. ನಟಿ ರಾಗಿಣಿ ದ್ವಿವೇದಿ, ಹಿರಿಯ ಕಲಾವಿದ ದೊಡ್ಡಣ್ಣ, ಕುಮಾರ್ ಬಂಗಾರಪ್ಪ ಮುಂತಾದವರು ಪಾತ್ರವರ್ಗದಲ್ಲಿ ಇದ್ದಾರೆ.
ರಾಜಕಾರಣಿ ಎಲ್.ಆರ್. ಶಿವರಾಮೇಗೌಡ ಕೂಡ ಈ ಸಿನಿಮಾದ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಅಂತಿಮ ಹಂತದ ಚಿತ್ರೀಕರಣ ಕುರಿತಂತೆ ಚಿತ್ರತಂಡವು ಇತ್ತಿಚೆಗೆ ಮಾಹಿತಿ ನೀಡಿದ್ದು ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರದ ಮೇಕಿಂಗ್ ವಿಡಿಯೋವನ್ನು ಬಿಡುಗಡೆ ಮಾಡಿದೆ.
ನಟಿ ರಾಗಿಣಿ ಈ ಚಿತ್ರದ ಕುರಿತಂತೆ ಮಾತನಾಡಿ ಇದೊಂದು ಅಪ್ಪಟ ಗ್ರಾಮೀಣ ಸೊಗಡಿನ ಸಿನಿಮಾ. ಮೊದಲ ಬಾರಿಗೆ ಈ ಸಿನಿಮಾದಲ್ಲಿ ಗ್ರಾಮೀಣ ಭಾಗದ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ.
ಹಳ್ಳಿ ಹುಡುಗಿಯೊಬ್ಬಳು ತನ್ನ ಊರಿನ ಸರ್ಕಾರಿ ನ್ಯಾಯಬೆಲೆ ಅಂಗಡಿಯಲ್ಲಿ ನಡೆಯುವ ಭ್ರಷ್ಟ ವ್ಯವಸ್ಥೆಯ ವಿರುದ್ಧ ಹೇಗೆ ಹೋರಾಡುತ್ತಾಳೆ ಎಂಬುದೇ ನನ್ನ ಪಾತ್ರ. ಸಿನಿಮಾ ತುಂಬ ಚೆನ್ನಾಗಿ ಬರುತ್ತಿದೆ, ಗ್ರಾಮೀಣ ಜನರಿಗೆ ಖಂಡಿತವಾಗಿಯೂ ಈ ಸಿನಿಮಾ ಇಷ್ಟವಾಗಲಿದೆ’ ಎಂದಿದ್ದಾರೆ.
ಪ್ರಮುಖ ಪಾತ್ರದಲ್ಲಿ ನಟಿಸಿರುವ ಕುಮಾರ್ ಬಂಗಾರಪ್ಪ ಮಾತನಾಡಿ ಹಳ್ಳಿಯ ಜನರಿಗೆ ಹತ್ತಿರವಾಗುವಂಥ ಕಥೆ ಈ ಚಿತ್ರದಲ್ಲಿದೆ ಎನ್ನುವ , ಪಡಿತರ ವ್ಯವಸ್ಥೆಯ ಲೋಪಗಳನ್ನು ಬಹುತೇಕ ಜನಸಾಮಾನ್ಯರು ಅನುಭವಿಸಿರುತ್ತಾರೆ.
ಅಂಥ ಎಲ್ಲಾ ಜನರಿಗೂ ಈ ಸಿನಿಮಾ ಮನ ಮುಟ್ಟುತ್ತದೆ. ಬಹು ಸಮಯದ ನಂತರ ನಾನು ಈ ಸಿನಿಮಾದಲ್ಲಿ ಹಳ್ಳಿಯ ಜನಸಾಮಾನ್ಯ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಆಹಾರ ಭದ್ರತೆಯ ಮೇಲೆ ಮಾಡಿರುವ ಈ ಸಿನಿಮಾದಲ್ಲಿ ಒಂದು ಸಂದೇಶವಿದೆ’ ಎಂದಿರುವ ಬಂಗಾರಪ್ಪ ಚಿತ್ರದ ಬಗ್ಗೆ ಭರವಸೆ ಹೆಚ್ಚಿಸಿದ್ದಾರೆ.
‘ಜಯಶಂಕರ ಟಾಕೀಸ್’ ಬ್ಯಾನರಿನಲ್ಲಿ ಶ್ರೀಮತಿ ತೇಜು ಮೂರ್ತಿ ಮತ್ತು ಎಸ್. ಪದ್ಮಾವತಿ ಬಂಡವಾಳ ಹೂಡಿಕೆ ಮಾಡಿ ನಿರ್ಮಿಸುತ್ತಿದ್ದಾರೆ . ಬಿ. ರಾಮಮೂರ್ತಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ.
ಈ ಹಿಂದೆ ‘ತಾಯವ್ವ’ ಚಿತ್ರವನ್ನು ನಿರ್ದೇಶಿಸಿದ್ದ ಸಾತ್ವಿಕ ಪವನ ಕುಮಾರ್, ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರಕ್ಕೆ ಛಾಯಾಗ್ರಹಣ ಮತ್ತು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ಹಾಡುಗಳಿಗೆ ಅನಂತ ಆರ್ಯನ್ ಸಂಗೀತ ಸಂಯೋಜಿಸಿದ್ದಾರೆ.