ಹುಬ್ಬಳ್ಳಿ : ಗಣೇಶ ಚತುರ್ಥಿ ಹಾಗೂ ಸರಣಿ ರಜೆ ಹಿನ್ನೆಲೆಯಲ್ಲಿ ಸಾರ್ವಜನಿಕರ ಪ್ರಯಾಣಿಕರ ಅನುಕೂಲಕ್ಕಾಗಿ ಆಗಸ್ಟ್ 22 ರಿಂದ 31ರವರೆಗೆ ಹೆಚ್ಚುವರಿ ವಿಶೇಷ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (NWKRTC) ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡ ತಿಳಿಸಿದ್ದಾರೆ.

ಆಗಸ್ಟ್ 24 ರಂದು ನಾಲ್ಕನೇ ಶನಿವಾರ, 25 ಮತ್ತು 31ರಂದು ಭಾನುವಾರ ರಜೆ, 26 ರಂದು ಗೌರಿ ಹಬ್ಬದ ನಿರ್ಬಂಧಿತ ರಜೆ ಹಾಗೂ 27 ರಂದು ಗಣೇಶ ಚತುರ್ಥಿ ಸಾರ್ವಜನಿಕ ರಜೆ ಹಿನ್ನೆಲೆಯಲ್ಲಿ ಜಿಲ್ಲೆಯ ಹೊರಗಡೆ ಕೆಲಸ, ಶಿಕ್ಷಣ ಹಾಗೂ ವ್ಯಾಪಾರಕ್ಕಾಗಿ ನೆಲೆಸಿರುವ ಜನರು ಹಬ್ಬದ ಆಚರಣೆಗೆ ತಮ್ಮ ಸ್ಥಳಗಳಿಗೆ ಪ್ರಯಾಣಿಸುವ ನಿರೀಕ್ಷೆ ಇದೆ.

ಹಬ್ಬಕ್ಕೆ ಬರೋವರಿಗಾಗಿ ವಿಶೇಷ ವ್ಯವಸ್ಥೆ

ಆಗಸ್ಟ್ 22 ರಿಂದ 26 ರವರೆಗೆ ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಿಂದ ಹುಬ್ಬಳ್ಳಿ, ಕಲಘಟಗಿ, ನವಲಗುಂದ ಮತ್ತಿತರ ಸ್ಥಳಗಳಿಗೆ ಹೆಚ್ಚುವರಿ ವಿಶೇಷ ಬಸ್‌ಗಳು ಲಭ್ಯವಿರುತ್ತವೆ.

ಹಬ್ಬದ ನಂತರ ಹಿಂದಿರುಗುವವರಿಗಾಗಿ ವ್ಯವಸ್ಥೆ

ಹಬ್ಬ ಹಾಗೂ ರಜೆ ಮುಗಿದ ಬಳಿಕ ಆಗಸ್ಟ್ 27 ರಿಂದ 31 ರವರೆಗೆ ಹುಬ್ಬಳ್ಳಿ, ಕಲಘಟಗಿ, ನವಲಗುಂದ ಮುಂತಾದ ಸ್ಥಳಗಳಿಂದ ಬೆಂಗಳೂರು, ಗೋವಾ, ಪುಣೆ, ಹೈದರಾಬಾದ್, ವಿಜಯಪುರ, ಬಾಗಲಕೋಟೆ ಸೇರಿದಂತೆ ಪ್ರಮುಖ ಸ್ಥಳಗಳಿಗೆ ಹೆಚ್ಚುವರಿ ವಿಶೇಷ ಬಸ್‌ಗಳನ್ನು ಓಡಿಸಲಾಗುತ್ತದೆ.

ವಿವಿಧ ಮಾದರಿಯ ಬಸ್‌ಗಳ ನಿಯೋಜನೆ

ಪ್ರಯಾಣಿಕರ ಬೇಡಿಕೆಯನ್ನು ಗಮನಿಸಿ ವೋಲ್ವೋ ಎಸಿ ಐರಾವತ, ಎಸಿ ಸ್ಲೀಪರ್, ನಾನ್ ಎಸಿ ಸ್ಲೀಪರ್, ರಾಜಹಂಸ, ವೇಗದೂತ ಸೇರಿ ವಿವಿಧ ಮಾದರಿಯ ಬಸ್‌ಗಳನ್ನು ಈ ಅವಧಿಗೆ ನಿಯೋಜಿಸಲಾಗಿದೆ. ಜಿಲ್ಲೆ ಹಾಗೂ ಅಕ್ಕಪಕ್ಕದ ಜಿಲ್ಲೆಗಳ ಪ್ರಮುಖ ಸ್ಥಳಗಳ ನಡುವೆಯೂ ಹೆಚ್ಚಿನ ಸಂಖ್ಯೆಯಲ್ಲಿ ಬಸ್‌ಗಳನ್ನು ನಿರ್ವಹಿಸಲಾಗುತ್ತದೆ.

ಮುಂಗಡ ಬುಕ್ಕಿಂಗ್ ಮತ್ತು ರಿಯಾಯಿತಿ ಸೌಲಭ್ಯ

ಪ್ರಯಾಣಿಕರು ಹಬ್ಬದ ವಿಶೇಷ ಬಸ್ಸುಗಳಿಗೆ www.ksrtc.in , KSRTC ಮೊಬೈಲ್ ಆಪ್ ಅಥವಾ ಬಸ್ ನಿಲ್ದಾಣಗಳಲ್ಲಿ ಮುಂಗಡ ಬುಕ್ಕಿಂಗ್ ಮಾಡಿಕೊಳ್ಳಬಹುದು.

ಒಂದೇ ಟಿಕೆಟ್‌ನಲ್ಲಿ ನಾಲ್ಕು ಅಥವಾ ಹೆಚ್ಚಿನ ಸೀಟುಗಳನ್ನು ಕಾಯ್ದಿರಿಸಿದರೆ ಪ್ರಯಾಣ ದರದಲ್ಲಿ 5% ರಿಯಾಯಿತಿ ಸಿಗಲಿದೆ.

ಹೋಗುವ ಮತ್ತು ಹಿಂದಿರುಗುವ ಪ್ರಯಾಣಕ್ಕೆ ಒಂದೇ ಟಿಕೆಟ್ ಪಡೆದರೆ ಹಿಂದಿರುಗುವ ಪ್ರಯಾಣ ದರದಲ್ಲಿ 10% ರಿಯಾಯಿತಿ ದೊರೆಯಲಿದೆ ಎಂದು ಸಂಸ್ಥೆ ತಿಳಿಸಿದೆ.

Leave a Reply

Your email address will not be published. Required fields are marked *