ಬೆಂಗಳೂರು: ಕರ್ನಾಟಕ ಸರ್ಕಾರವು ಸಂಚಾರಿ ಇ-ಚಲನ್ನಲ್ಲಿ ದಾಖಲಾಗಿರುವ ಬಾಕಿ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇಕಡಾ 50ರಷ್ಟು ರಿಯಾಯಿತಿ ನೀಡಲು ಆದೇಶ ಹೊರಡಿಸಿದೆ. ಈ ಸಡಿಲಿಕೆ 2025ರ ಆಗಸ್ಟ್ 23ರಿಂದ ಸೆಪ್ಟೆಂಬರ್ 12ರವರೆಗೆ ಇತ್ಯರ್ಥಗೊಳ್ಳುವ ಪ್ರಕರಣಗಳಿಗೆ ಮಾತ್ರ ಅನ್ವಯವಾಗಲಿದೆ ಎಂದು ಸಾರಿಗೆ ಇಲಾಖೆಯ ಅಧೀನ ಕಾರ್ಯದರ್ಶಿಗಳು ತಿಳಿಸಿದ್ದಾರೆ.
ಹಿಂದಿನ ವರ್ಷಗಳಲ್ಲಿ (2023 ಹಾಗೂ 2025ರ ಜುಲೈ ಅವಧಿ) ಸರ್ಕಾರವು ಇದೇ ರೀತಿಯ ಒಂದು ಬಾರಿಯ ಕ್ರಮವಾಗಿ ಶೇ.50% ರಿಯಾಯಿತಿ ನೀಡಿತ್ತು. ನಾಗರಿಕರಿಂದ ಬಂದ ಮನವಿ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಶಿಫಾರಸು ಹಿನ್ನೆಲೆಯಲ್ಲಿ ಮತ್ತೆ ಈ ಅವಕಾಶ ಕಲ್ಪಿಸಲಾಗಿದೆ.
ಫೆಬ್ರವರಿ 11, 2023ರೊಳಗೆ ದಾಖಲಾಗಿದ್ದ ಪ್ರಕರಣಗಳಿಗೆ ಶೇ.50% ರಿಯಾಯಿತಿ ನೀಡಲಾಗಿತ್ತು. ಮಾರ್ಚ್ 3, 2023 ಮತ್ತು ಜುಲೈ 5, 2023ರಂದು ಹೊರಡಿಸಿದ ಆದೇಶಗಳ ಮೂಲಕ ಇದೇ ಸಡಿಲಿಕೆ ವಿಸ್ತರಿಸಲಾಗಿತ್ತು. ಆಗಿನಂತೆ 2023ರ ಸೆಪ್ಟೆಂಬರ್ 9ರವರೆಗೆ ರಿಯಾಯಿತಿ ಅವಧಿ ನಿಗದಿಪಡಿಸಲಾಗಿತ್ತು.
ಈ ಬಾರಿ ಸಡಿಲಿಕೆಯ ಅವಧಿ
ಹೊಸ ಆದೇಶದ ಪ್ರಕಾರ, 2025ರ ಆಗಸ್ಟ್ 23ರಿಂದ ಸೆಪ್ಟೆಂಬರ್ 12ರವರೆಗೆ ಇತ್ಯರ್ಥಗೊಳ್ಳುವ ಎಲ್ಲಾ ಬಾಕಿ ಪ್ರಕರಣಗಳಿಗೆ ಶೇ.50% ರಿಯಾಯಿತಿ ಲಭ್ಯ.
ವಾಹನ ಮಾಲೀಕರಿಗೂ ಅನುಕೂಲ
ಸಾರಿಗೆ ಮತ್ತು ರಸ್ತೆ ಸುರಕ್ಷತಾ ಆಯುಕ್ತರು ಸಲ್ಲಿಸಿದ ಪ್ರಸ್ತಾವನೆಯ ಪ್ರಕಾರ, 2018–19ನೇ ಸಾಲಿನ ಪೂರ್ವದಲ್ಲಿ ದಾಖಲಾಗಿರುವ ಪ್ರಕರಣಗಳಲ್ಲಿ ವಾಹನ ಮಾಲೀಕರಿಗೂ ಈ ರಿಯಾಯಿತಿ ಅನ್ವಯವಾಗಲಿದೆ.