ಬೆಂಗಳೂರು: ನಟ ವಿಕ್ರಮ್ ರವಿಚಂದ್ರನ್ ಅವರ ಮುಂದಿನ ಚಿತ್ರ ಮುಧೋಳ್ ಕನ್ನಡ ಸಿನಿರಂಗದಲ್ಲಿ ಹೊಸ ಅಲೆಯನ್ನು ತರುತ್ತಿದೆ. ನಿರ್ಮಾಪಕಿ ರಕ್ಷಾ ಹಾಗೂ ವಿಜಯ್ ಟಾಟಾ ಸಂಹಯೋಗದಲ್ಲಿ ಮುಧೋಳ್ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ಹೊರತರಲು ಕೊಲಾಬ್ರೇಶನ್ ಮಾಡಿಕೊಂಡಿದ್ದಾರೆ. ಈ ವಿಷಯವನ್ನು ಇತ್ತಿಚೆಗೆ ನಟ ವಿಕ್ರಮ ಹಂಚಿಕೊಂಡಿದ್ದರು.
ಮುಧೋಳ್ ನಗರವನ್ನು ಹಿನ್ನೆಲೆಯನ್ನಾಗಿಸಿಕೊಂಡಿರುವುದರಿಂದ, ಚಿತ್ರದ ಬಹುಭಾಗದ ಚಿತ್ರೀಕರಣವನ್ನು ಅಲ್ಲಿಯೇ ಮಾಡಲಾಗುತ್ತಿದೆ. ತಂಡ ಶೀಘ್ರದಲ್ಲೇ ಮುಂದಿನ ಹಂತದ ಶೂಟಿಂಗ್ ಪ್ರಾರಂಭಿಸಲು ಸಿದ್ಧವಾಗುತ್ತಿದೆ.
ನಟ ವಿಕ್ರಮ್ ಹೇಳುವಂತೆ, “ಮುಧೋಳ್ ಸಿನಿಮಾದಲ್ಲಿ ನಾವು ಎಲ್ಲರೂ ಹೊಸಬರೇ. ನಿರ್ದೇಶಕರು ಕಾರ್ತಿಕ್ ರಾಜನ್ ಮೊದಲ ಸಿನಿಮಾ ಮಾಡುತ್ತಿದ್ದಾರೆ. ಸಂಗೀತ ನಿರ್ದೇಶಕ ಯುವರಾಜ್ ಚಂದ್ರನ್, ಛಾಯಾಗ್ರಾಹಕ ಸಂದೀಪ್ ವಲ್ಲೂರಿ, ಡೈಲಾಗ್ ರೈಟರ್ ಮಾಸ್ತಿ—ಎಲ್ಲರೂ ಹೊಸಬರು. ನಾನು ಕೂಡ ಈ ಸಿನಿಮಾ ಮಾಡುವ ಮುನ್ನ ಒಂದು ವರ್ಷ ಕಾದಿದ್ದೇನೆ. ತ್ರಿವಿಕ್ರಮ್ ನಂತರ ಒಪ್ಪಿಕೊಂಡಿರುವ ಸಿನಿಮಾ ಇದಾಗಿದೆ,” ಎಂದಿದ್ದಾರೆ.
ಚಿತ್ರದ ಕುರಿತು ಅಭಿಮಾನಿಗಳಲ್ಲಿ ಈಗಾಗಲೇ ಕುತೂಹಲ ಹೆಚ್ಚಾಗಿದ್ದು, ಮುಧೋಳ್ ತಂಡ ಸದ್ಯದಲ್ಲೇ ಮುಧೋಳ್ ನಗರದಲ್ಲಿ ಮುಂದಿನ ಹಂತದ ಶೂಟಿಂಗ್ ಪ್ರಾರಂಭಿಸಲು ಸಿದ್ಧತೆ ನಡೆಸುತ್ತಿದೆ. ವಿಕ್ರಮ್ ರವಿಚಂದ್ರನ್ ಅಭಿಮಾನಿ ಬಳಗ (VKR ಕುಟುಂಬ) ಈ ಸಂದರ್ಭದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದೆ. ವಿಶೇಷವಾಗಿ ಬಾಗಲಕೋಟೆ ಹಾಗೂ ಸುತ್ತಮುತ್ತಲಿನ ಜಿಲ್ಲೆಯ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ಹತ್ತಿರದಿಂದ ನೋಡುವ ಉತ್ಸಾಹದಲ್ಲಿದ್ದಾರೆ.
ವಿಜಯ್ ಟಾಟಾ ಅವರ ಬೆಂಬಲದಿಂದ ಚಿತ್ರಕ್ಕೆ ಹೆಚ್ಚಿನ ಶಕ್ತಿ ಸಿಕ್ಕಿದ್ದು, ಹೊಸಬರ ತಂಡದಿಂದ ಸಿದ್ಧವಾಗುತ್ತಿರುವ ಮುಧೋಳ್ ಚಿತ್ರವು ಕನ್ನಡ ಸಿನಿ ಪ್ರೇಮಿಗಳಿಗೆ ಹೊಸ ಅನುಭವ ನೀಡಲಿದೆ. ಮುಧೋಳ್ ಚಿತ್ರವು ವಿಕ್ರಮ್ ಅವರ ವೃತ್ತಿಜೀವನಕ್ಕೆ ಹೊಸ ಮೈಲುಗಲ್ಲಾಗಬಹುದೆಂಬ ನಿರೀಕ್ಷೆ ಮೂಡಿಸಿದೆ.